ಬಯಲು ಸೀಮೆ ಜನರ ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ಕುಂಟುತ್ತಾ ಸಾಗಿದೆ. ಯೋಜನೆಗೆ ಹೆಚ್ಚು ನೀರು ಕೊಡುವ ತುಂಗಾ ಜಲಾಶಯದಿಂದ ಭದ್ರಾಕ್ಕೆ ಲಿಫ್ಟ್ ಮಾಡುವ ಕಾಮಗಾರಿಯ ಎರಡು ಲಿಫ್ಟ್ ಗಳು ಮತ್ತು 500 ಮೀಟರ್ ಸುರಂಗ ಕಾಲುವೆ ಮಾಡಲು 15 ವರ್ಷಗಳಾದರೂ ಸಾಧ್ಯವಾಗಿಲ್ಲ ಎಂದು ಕಾಮಗಾರಿ ವೀಕ್ಷಣೆ ಮಾಡಿದ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಆಕ್ರೋಶ ವ್ಯಕ್ತಪಡಿಸಿದರು. ಡಿಸೆಂಬರ್ 16ರಂದು ಹಿರಿಯೂರಿನ 12 ಜನ ರೈತರ ತಂಡ ತುಂಗಾ ಜಲಾಶಯದಿಂದ ಆರಂಬಿಕ ಹಂತ ಮುತ್ತಿನಕೊಪ್ಪ ಇಂಟೇಕ್ ಕ್ಯನಾಲ್ ತುಂಗಾ ಜಲಾಶಯದ ಹಿನ್ನೀರಿನ ಪ್ರದೇಶದಿಂದ ಮೊದಲನೇ ಲಿಫ್ಟ್ ವರೆಗೂ ಕಾಲುವೆ ಮಾರ್ಗದಲ್ಲಿ ಸುರಂಗ ಮಾರ್ಗದವರೆಗೆ ಕಾಮಗಾರಿ ವೀಕ್ಷಿಸಿದಾಗ ಅಲ್ಲಲ್ಲಿ ಕಾಲುವೆ ಕಾಮಗಾರಿ ಬಾಕಿ ಉಳಿದಿದೆ.
ಮುತ್ತಿನ ಕೊಪ್ಪ ಸಮೀಪದ ಒಂದನೇ ಲಿಫ್ಟ್ ಪಂಪ್ ಹೌಸ್ ಕಟ್ಟಡ ಕಾಮಗಾರಿ ಅಪೂರ್ಣವಾಗಿದ್ದು ಅಲ್ಲಿ ಮೋಟರ್ ಪಂಪ್ ಗಳನ್ನು ಅಳವಡಿಸಲಾಗಿಲ್ಲ. ಅಲ್ಲದೆ ನೀರೆತ್ತುವ ಕೊಳವೆಗಳು ಹತ್ತು ಹದಿನೈದು ವರ್ಷಗಳ ಹಿಂದೆ ಖರೀದಿ ಮಾಡಿದ್ದು,ತುಕ್ಕು ಹಿಡಿಯುವಂತಾಗಿವೆ, ಅವುಗಳನ್ನೇ ಬಳಕೆ ಮಾಡಲಾಗುತ್ತಿದೆ ಇದರಿಂದ ಕಾಮಗಾರಿಯ ಗುಣಮಟ್ಟ ಕಳಪೆಯಾಗುತ್ತದೆ ಅಲ್ಲದೆ ವಿದ್ಯುತ್ ಟವರ್ ಗಳನ್ನು ನಿರ್ಮಿಸಲಾಗಿದೆ ಆದರೆ ವಿದ್ಯುತ್ ಮಾರ್ಗ ಎಳೆಯಲಾಗಿಲ್ಲ.ಅಲ್ಲದೆ ಎಲೆಕ್ಟ್ರಿಕ್ ಸಬ್ ಸ್ಟೇಷನ್ ಕಾಮಗಾರಿ ಅಪೂರ್ಣವಾಗಿದೆ. ಎರಡನೇ ಲಿಫ್ಟ್ ನ ಸಾತುಕೋಳಿ ಬಳಿ ಇರುವ ಕಾಮಗಾರಿಯು ಸಹ ಅಪೂರ್ಣವಾಗಿದೆ ಅಲ್ಲದೆ ಸುರಂಗ ಮಾರ್ಗ ಸಹ ಪೂರ್ಣವಾಗಿಲ್ಲ ಅಲ್ಲಲ್ಲಿ ಸೇತುವೆ ನಿರ್ಮಾಣ ಹಾಗೂ ಕಾಲುವೆ ಕಾಂಕ್ರೀಟ್ ಕಾಮಗಾರಿ ಬಾಕಿ ಇದೆ. ಈ ಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಕಾರಣಕ್ಕೆ ಆರು ತಿಂಗಳು ಮಾತ್ರ ಕಾಮಗಾರಿ ನಡೆಸಬಹುದು.ಅದರಲ್ಲಿಯೂ ನೀರನ್ನು ಹೊರ ಹಾಕಲು ಕೆಲವು ಸಮಯ ತೆಗೆದುಕೊಳ್ಳುತ್ತದೆ. ಈ ಬೇಸಿಗೆ ಕಳೆಯುವುದರೊಳಗೆ ಕಾಮಗಾರಿ ಮುಕ್ತಾಯಗೊಳಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಕೆಲವು ಭಾಗಗಳಲ್ಲಿ ಗುತ್ತಿಗೆದಾರರನ್ನು ಬದಲಾಯಿಸಲಾಗಿದೆ. ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಅರಣ್ಯ ಇಲಾಖೆ ಕಿರುಕುಳ ಕೊಡುತ್ತಿದೆ. ಇದಕ್ಕೆ ಬಯಲು ಸೀಮೆಯ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿ ಬೇಕಾಗುತ್ತದೆ ಇಲ್ಲವಾದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಆಮೆ ಗತಿಯಲ್ಲಿ ಅಲ್ಲ ಬಸವನ ಹುಳುವಿನ ಗತಿಯಲ್ಲಿ ಕಾಮಗಾರಿ ನಡೆದು ಬಯಲು ಸೀಮೆ ಜನರಿಗೆ ಭದ್ರಾ ನೀರು ಮರೀಚಿಕೆಯಾಗಲಿದೆ. ಈಗಾಗಲೇ ರಾಜಕೀಯದವರ ಭರವಸೆಗಳನ್ನು ನಂಬಿ ಬೇಸಾಯ ಮಾಡಲು ಇದ್ದಬದ್ದ ಹಣವನ್ನೆಲ್ಲ ತೊಡಗಿಸಿ ಸಾಲ ಶೂಲ ಮಾಡಿ ತೋಟಗಳನ್ನು ಕಟ್ಟಿದ್ದಾರೆ.ಇದೇ ರೀತಿ ಕಾಮಗಾರಿ ವಿಳಂಬವಾದರೆ ನೀರು ತಲುಪುವುದು ಗಗನಕುಸುಮವೇ ಸರಿ. ಬಯಲುಸೀಮೆ ಭಾಗದ ಜನರು ಪ್ರತಿ ಪಂಚಾಯತಿಯಿಂದ ತುಂಗಾ ಕಾಲುವೆ ಭಾಗದಲ್ಲಿ ಪ್ರವಾಸ ಮಾಡಿ ವಸ್ತು ಸ್ಥಿತಿಯನ್ನು ಅರಿತುಕೊಂಡು ಸರ್ಕಾರದ ಮೇಲೆ ಒತ್ತಡ ತರಬೇಕಾಗುತ್ತದೆ. ಮಠಾಧೀಶರು ಕೈಕಟ್ಟಿ ಕೂರುವಂತಿಲ್ಲ. ತಮನ್ನು ನಂಬಿದ ಭಕ್ತರಿಗೋಸ್ಕರ ಕಾಮಗಾರಿ ವೀಕ್ಷಿಸಬೇಕು .ವಸ್ತು ಸ್ಥಿತಿಯನ್ನು ಸರ್ಕಾರದ ಮುಂದಿಟ್ಟು ನೀರು ತರಲು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಬಯಲು ಸೀಮೆ ಜನರು ನಿಮ್ಮ ನಿಮ್ಮ ಪಕ್ಷನಿಷ್ಠೆ ಮತ್ತು ಮಠ ಭಕ್ತಿಯನ್ನು ಬದಿಗೊತ್ತಿ ಭದ್ರಾ ವೀಕ್ಷಿಸಿ ಹೋರಾಟಕ್ಕೆ ಬರಬೇಕು ಎಂದು ಈ ಮೂಲಕ ಕರೆ ಕೊಡುತ್ತೇವೆ. ಭದ್ರಾದಿಂದ ಬಯಲು ಸೀಮೆಗೆ ಬರುವ ವೈ-ಜಂಕ್ಷನ್ ಕಾಮಗಾರಿಯಂತು ನಿಂತಲ್ಲೇ ನಿಂತಿದೆ. ತುಮಕೂರು ಬ್ರಾಂಚ್ ಕ್ಯಾನಲ್ ಮತ್ತು ಚಿತ್ರದುರ್ಗ ಬ್ರಾಂಚ್ ಕ್ಯನಲ್ ಕಾಮಗಾರಿಗಳು ಅಲ್ಲಲ್ಲಿ ಜನರಿಗೆ ಕಾಣುವಂತೆ ಮಾಡಲಾಗಿದೆ ಮುಖ್ಯವಾದ ಭಾಗದಲ್ಲಿ ಕಾಮಗಾರಿ ಪ್ರಾರಂಭಿಸಲು ಮುಂದಾಗಿಲ್ಲ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಡ್ರಿಪ್ ಇರಿಗೇಶನ್, ಉಪಕಾಲುವೆಗಳು, ಇತರೆ ಸಮಸ್ಯೆ ಇಲ್ಲದ ಭಾಗಗಳಲ್ಲಿ ಮಾತ್ರ ಕಾಮಗಾರಿ ಮಾಡುತ್ತಾ ಬಯಲು ಸೀಮೆ ಜನರಿಗೆ ಮಂಕು ಭೂದಿ ಎರಚಲಾಗಿದೆ. ಉದಾಹರಣೆಗೆ ಅಬ್ಬಿನ ಹೂಳಲು 22 ಜನ ರೈತರಿಗೆ ಪರಿಹಾರ ಕೊಡದೆ ಇಡೀ ಯೋಜನೆ ರೋಗ ಗ್ರಸ್ತವಾಗಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಆರೋಪ ಪ್ರತ್ಯಾರೋಪ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಹೊರತು ನೀರು ಕೊಡುವ ಬದ್ಧತೆಯನ್ನು ಪ್ರದರ್ಶಿಸುತ್ತಿಲ್ಲ. ಇದನ್ನು ಪದೇ ಪದೇ ಬರುವ ಚುನಾವಣೆಗಳಲ್ಲಿ ಪ್ರಮುಖ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಹೊರತು ಆತ್ಮ ಪೂರ್ವಕವಾಗಿ ನೀರು ತರಲು ಉದ್ದೇಶಿಸಿಲ್ಲ. ಎಂದು ಕಸವನಹಳ್ಳಿ ರಮೇಶ್ ಆಕ್ರೋಶಭರಿತರಾಗಿ ನೊಂದು ನುಡಿದರು. ಈ ಸಂದರ್ಭದಲ್ಲಿ ಮೈಸೂರ್ ಶಿವಣ್ಣ. ವಿ. ಕುಬೇರಪ್ಪ. ರಾಮಚಂದ್ರ ಕಸವನಹಳ್ಳಿ .ಎಸ್. ವಿ ರಂಗನಾಥ್ ಕೆ.ಬುಡನ್ ಸಾಬ್, ವೀರಣ್ಣಗೌಡ. ಗುಡಿ ಗೌಡ ವಿಶ್ವನಾಥ್. ಹಳೆಯಳ ನಾಡು ದಿನೇಶ್. ಹೂವಿನಹೊಳೆ ಅಂಜನಪ್ಪ. ಮೆಟಿಕುರ್ಕೆ ನವೀನ್. ಅಧ್ಯಯನ ತಂಡದಲ್ಲಿ ಇದ್ದರು.
ಆಮೆಗತಿಯಲ್ಲಿ ತುಂಗಾ ಕಾಮಗಾರಿ! ಬಯಲುಸೀಮೆಗೆ ಬಾರದ ಭದ್ರೆ -ಕಸವನಹಳ್ಳಿ ರಮೇಶ್.

More Stories
ಆಶಾ ಕಾರ್ಯಕರ್ತೆಯರ ಪ್ರತಿಭಟನೆ, ಕಣ್ಣು ಮುಚ್ಚಿ ಕುಳಿತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು…….
ಧರ್ಮಪುರ ಕೆರೆಗಳಿಗೆ ನೀರು ಹರಿಸಲು ಸಚಿವರಿಗೆ ಮನವಿ….. ಕಸವನಹಳ್ಳಿ ರಮೇಶ್