ಎಸ್ಕಾಂಗಳು ಲಂಗು ಲಗಾಮು ಇಲ್ಲದ ಕಾಡು ಕುದುರೆಯಂತೆ ಆಗಿಹೋಗಿದೆ.?
ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ದುರ್ಗಾ ಪ್ರಸಾದ್ ಮೃತ ದೇಹ
ಪ್ರತಿ ಕಂಪನಿಯಲ್ಲಿ ವಾರ್ಷಿಕ ಕನಿಷ್ಠ 100ರಿಂದ150 ಮಾರ್ಗದಾಳುಗಳು ನೇರವಾಗಿ ವಿದ್ಯುತ್ತಿನಿಂದಲೇ ಮರಣ ಹೊಂದುತ್ತಿರವುದು ಮಹಾ ದೌರ್ಭಾಗ್ಯದ ವಿಷಯವಾಗಿದೆ. ಸರ್ಕಾರವು ಪ್ರತಿ ಒಬ್ಬ ಮಾರ್ಗದಾಳುವಿಗೆ ಬೇಕಾದಂತಹ ಸುರಕ್ಷಿತಾ ಸಲಕರಣೆಗಳನ್ನು ಕೊಟ್ಟಿದ್ದರೂ ಸಹ ಈರೀತಿ ಜೀವ ಅಪಘಾತಗಳು ನಡೆಯುತ್ತಿರುವುದು ಎಷ್ಟು ಸರಿ ಇಂಧನ ಸಚಿವರೆ?
ಬೆಸ್ಕಾಂನ ತುಮಕೂರು ವಿಭಾಗ ತುಮಕೂರು ಗ್ರಾಮಾಂತರ 2ನೇ (RSD2)ಉಪ ವಿಭಾಗದ ಹೆಬ್ಬೂರು ಶಾಖೆಯ ಸಹಾಯಕ ಮಾರ್ಗದಾಳು ಎಚ್ ಎಲ್ ದುರ್ಗಾ ಪ್ರಸಾದ್ ರಾಗಿಮುದ್ದೆನಹಳ್ಳಿಯ ಗ್ರಾಮದಲ್ಲಿ 11 ಕೆವಿ ವಿದ್ಯುತ್ ಮಾರ್ಗದ ದುರಸ್ತಿ ಕೆಲಸ ಮಾಡುವಾಗ, ಮೈಮೇಲೆ ವಿದ್ಯುತ್ ಪ್ರವಹಿಸಿ, ಕಂಬದ ಮೇಲೆಯೇ ಕೊನೆ ಉಸಿರು ಎಳೆದಿದ್ದಾರೆ.
ಮಾರ್ಗದಾಳು ದುರ್ಗಾ ಪ್ರಸಾದ್ ವಿದ್ಯುತ್ ದುರಸ್ತಿ ಕಾರ್ಯನಿರ್ವಹಿಸುವಾಗ ಕೈಗೆ ವಿದ್ಯುತ್ ಸುರಕ್ಷಿತ ಗ್ಲೌಸ್ ಗಳನ್ನು ಬಳಸಿ ಕೆಲಸ ಮಾಡಲು ಮುಂದಾಗಿದ್ದರೂ ಸಹ ವಿದ್ಯುತ್ ಪ್ರವಹಿಸಿರುವುದು ದುರದೃಷ್ಟಕರ. ಬೆಸ್ಕಾಂ ಕಂಪನಿ ಕೊಟ್ಟಿರುವ ಗ್ಲೌಸ್ ನ ಗುಣಮಟ್ಟ 11000 ವೋಲ್ಟ್ ವಿದ್ಯುತ್ತನ್ನು ತಡೆಯುವ ಶಕ್ತಿಯದ್ದಾಗಿತ್ತೇ ಎನ್ನುವ ಅನುಮಾನ ಕಾಡುತ್ತಿದೆ. ಮಾತ್ರವಲ್ಲ, ಆ ಗ್ಲೌಸ್ ನಲ್ಲಿ ರಂದ್ರಗಳು ಕಂಡು ಬಂದಿದ್ದು, ರಂದ್ರದಿಂದ ವಿದ್ಯುತ್ ಪ್ರವಹಿಸಿರುವ ಸಂಶಯ ಹೆಚ್ಚಾಗಿವೆ ಎಂದು ಪ್ರತ್ಯಕ್ಷ ದರ್ಶಿಗಳು ಹೇಳುತ್ತಿದ್ದಾರೆ.
2017ರ ಬ್ಯಾಚ್ ನಲ್ಲಿ ಬೆಸ್ಕಾಂ ಕಂಪನಿಗೆ ಆಯ್ಕೆಯಾದ ದುರ್ಗಾ ಪ್ರಸಾದ್ ತುಮಕೂರು ಸಿರಿವಾರ ಕ್ಯಾಂಪ್ ಲೈನ್ ಮ್ಯಾನ್ ಆಗಿ ಕಳೆದ 7ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇವರಿಗೆ ಕನಿಷ್ಠ 8 ರಿಂದ 10 ಫೀಡರ್ ಗಳ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಅಧಿಕಾರಿಗಳು ನೀಡಿದ್ದರು. ಒಬ್ಬ ಮಾರ್ಗದಾಳುವಿಗೆ ಲಕ್ಷಾಂತರ ಗ್ರಾಹಕರು ಇರುವಂತಹ ಕಾರ್ಯವನ್ನು ಒಪ್ಪಿಸಿದರೆ ಏಕ ಮಾತ್ರನು ಹೇಗೆ ಕಾರ್ಯನಿರ್ವಹಿಸಲು ಸಾಧ್ಯ? ತುಮಕೂರು ವಿಭಾಗ ಅಧಿಕಾರಿಗಳೇ, ಏಕೆ ನಿಮ್ಮಲ್ಲಿ ಮಾರ್ಗದಾಳುಗಳ ಸಂಖ್ಯೆ ಕಮ್ಮಿ ಇದೆಯೇ? ಅಥವಾ ಹೆಬ್ಬೂರಿನ ಶಾಖೆಯಲ್ಲಿರುವ ಮಾರ್ಗದಾಳುಗಳನ್ನು ವಿಭಾಗ ಉಪ ವಿಭಾಗ ಅಧೀಕ್ಷಕ ಇಂಜಿನಿಯರ್ ಕಾರ್ಯಾಲಯಗಳಲ್ಲಿ ಶಾಖೆಗಳಿಂದ ಎರವಲಾಗಿ ತೆಗೆದುಕೊಂಡು, ನಿಮ್ಮ ಮತ್ತು ಕಚೇರಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದೀರ?
ದಿನದಿಂದ ದಿನಕ್ಕೆ ಎಸ್ಕಾಂಗಳಲ್ಲಿ ಪವರ್ ಮ್ಯಾನ್ ಗಳ ಸಂಖ್ಯೆ ಗಣನೀಯವಾಗಿ ಕಮ್ಮಿಯಾಗುತ್ತಿದ್ದರೂ ಸರ್ಕಾರವು ಎಚ್ಚೆತ್ತುಕೊಳ್ಳದೆ, ಮಾರ್ಗದಾಳುಗಳ ಸುರಕ್ಷತೆಗೆ ಪರಿಹಾರ ಮಾರ್ಗವನ್ನು ಹುಡುಕುವುದು ಯಾವಾಗ?ಇದೇ ರೀತಿ ಮುಂದುವರೆದಲ್ಲಿ ಮುಂದೊಂದು ದಿನ ಪವರ್ ಮ್ಯಾನ್ ಗಳಿಲ್ಲದ ಎಸ್ಥಾಂಗಳಾಗಿ ಉಳಿದು ಹೋಗಬಹುದು. ಆಗ ಸಾರ್ವಜನಿಕರ ಒತ್ತಡವು ಹೆಚ್ಚಾಗಬಹುದು.
ಯಾವುದೇ ಮಾರ್ಗದಾಳು ತಾನು ಕಾರ್ಯನಿರ್ವಹಿಸುವಾಗ ಸುರಕ್ಷತೆಯ ಪರಿಕರಗಳನ್ನು ತೆಗೆದುಕೊಂಡು ಹೋಗದೆ, ಶಾಖಾ ಅಧಿಕಾರಿಗಳ ಮಾತಿನ ನಂಬಿಕೆಯ ಮೇಲೆ ತಂತಿಯಲ್ಲಿ ವಿದ್ಯುತ್ತಿನ ಇರುವಿಕೆಯನ್ನು ಗಮನಿಸದೆ ಕಂಬ ಹತ್ತಿ ಕ್ಷಣಾರ್ಧದಲ್ಲಿ ಪ್ರಾಣ ಪಕ್ಷಿಯನ್ನು ಹಾರಿಸಿಕೊಳ್ಳುತ್ತಾರೆ.
ಮಾರ್ಗದಾಳುಗಳ ಮರಣ ಸ್ವಯಂಕೃತ ಅಪರಾಧವೊ ಅಥವಾ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿತನವೋ?ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಕೂತಿರುವ ಹಿರಿಯ ಅಧಿಕಾರಿಗಳೇ ಹೇಳಬೇಕು.
ಪ್ರತಿ ಮಾರ್ಗದಾಳು ತನ್ನ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಹುತಾತ್ಮನಾದಾಗ ಕಚೇರಿ ಅಧಿಕಾರಿಗಳಾಗಿರಬಹುದು ಅಥವಾ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕರು, ತಾಂತ್ರಿಕ ನಿರ್ದೇಶಕರು, ಮಾನವ ಸಂಪನ್ಮೂಲ ಅಧಿಕಾರಿಗಳಾಗಲಿ ಯಾರೊಬ್ಬರೂ ಮಡಿದ ಮಾರ್ಗದಾಳುವಿನ ಜೀವಕ್ಕೆ ಶ್ರದ್ಧಾಂಜಲಿಯ ಮಾತುಗಳನ್ನು ಆಡುವುದಿಲ್ಲ. ಆ ಕುಟುಂಬದವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುವುದಿಲ್ಲ. ಕೊನೆಗೆ ಮಡಿದ ಮಾರ್ಗದಾಳುವಿಗೆ ಕಂಪನಿ ನಿಯಮ ಹಾಗೂ ಕಾನೂನಾತ್ಮಕವಾಗಿ ಕೊಡಬೇಕಾದ ಪರಿಹಾರ, ಸಹಾನುಭೂತಿ ಅಂಶಗಳನ್ನು ಶೀಘ್ರ ಮಾಡಿ ಮುಗಿಸುವ ಕೆಲಸಗಳನ್ನು ಸಂಬಂಧ ಪಟ್ಟ ಲೆಕ್ಕಾಧಿಕಾರಿಗಳು ಮುಗಿಸಿ ಮುಂದಕ್ಕೆ ಕಳಿಸೋದಿಲ್ಲ. ಮಡಿದ ಮಾರ್ಗದಾಳು ಕುಟುಂಬ ಶಾಖೆ, ಉಪ ವಿಭಾಗ, ವಿಭಾಗ, ಅಧಿಕ್ಷಕ ಅಭಿಯಂತರರು, ಮುಖ್ಯ ಅಭಿಯಂತರರು, ಕೇಂದ್ರ ಕಚೇರಿಯಲ್ಲಿ ಪರಿಹಾರ ನಿಧಿ ನೀಡುವ ಅಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರು ಇವರೆಲ್ಲ ಸಹನೆಯಿಂದ ಸಹಿ ಹಾಕಿ, ಪರಿಹಾರ ಪಡೆಯುವಷ್ಟರಲ್ಲಿ ಸತ್ತ ಮನುಷ್ಯನ ನೆನಪು ಸಹ ಸತ್ತು ಹೋಗಿರುತ್ತದೆ!!
ಮೇಲಿಂದ ಮೇಲೆ ವಿದ್ಯುತ್ ನಿಂದಾಗಿ ಪ್ರಾಣ ಅಪಘಾತ ಪ್ರಕರಣಗಳು ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಸಂಬಂಧಪಟ್ಟ ಎಸ್ಕಾಂಗಳು ಮುಂದಿನ ದಿನಗಳಲ್ಲಿ ಯಾವ ರೀತಿಯ ಮಾನವ ಸಂಪನ್ಮೂಲ ನಿರ್ವಹಣೆ ಮಾಡುತ್ತವೆಯೋ ಆ ಭಗವಂತನೇ ಬಲ್ಲ!!
ಅಧಿಕಾರಿಗಳು ದೊಡ್ಡ ಕಳ್ಳರು… ಖದೀಮರು. ITI ಮಾಡಿದವರನ್ನ ತಗೋಳಲ್ಲ. Sslc ಮೇಲೆ ಕರಕೊಂಡು ಸಾಯಿಸ್ತಾರೆ..